Tuesday, July 20, 2010

ನೆನಪಿರಲಿ ನಿನಗೆ ನನ್ನ ಉಸಿರು ನೀನೆ.....


ನನ್ನ ಹೃದಯದಲಿ ಸಾವಿರ ನವಿರುಭಾವನೆಗಳನ್ನು
ನೀ ಬಡಿದೇಳಿಸಿರುವೆ.....
ಆದರೆ, ಆ ಸಾವಿರದಲ್ಲಿ ಒಂದು ಭಾವನೆಗೆ ನೀ ಸ್ಪಂದಿಸಿರುವೆಯಾ.....??
ನೀ ಯಾಕೆ ಹೀಗಾದೆ.....??

ನಾನೆಲ್ಲಾದರೂ ದೂರ ಹೊರಟು ಬಿಡುವೆ.....
ನಿನ್ನ ಮನದಲ್ಲಿರುವುದೇನೆಂದಾದರು ಉಸುರು.....
ನೆನಪಿರಲಿ ನಿನಗೆ ನನ್ನ ಉಸಿರು ನೀನೆ ಎಂಬುದು.....!!
-
ಆಶ್ರಿತಾ ಬಂಗೇರ

Wednesday, July 14, 2010

ನೆನಪೊಂದೇ ನಿರಂತರ.....


ಮರೆತುಬಿಡು ಎಂದು ಹೇಳಿತು ಮನವು,
ತೊರೆದು ಹೋಗು ಎಂದು ಹೇಳಿತು ಹೃದಯವು,
ನೆನಪು ಕರಗಿಸು ಎಂದು ಹೇಳಿತು ಕನಸು,
ಆದರೆ.....,
ಮರೆತು ಹೇಳಿ ತೊರೆದು ಹೋಗದ
ಹೃದಯದ ಕನಸು,
ನೆನಪೊಂದೇ ನಿರಂತರ.....
ಕರೆವುದು ನಿನ್ನ "ಪ್ರೀತಿ"......!!

-ಆಶ್ರಿತಾ ಬಂಗೇರ.

Tuesday, July 13, 2010

ಕಣ್ಮರೆಯಾಗಿದೆ ಭಾವನಾತ್ಮಕ ಮನಸು


ಯಾರ ಕಣ್ಣಿಗೂ ಕಾಣದ ಹಾಗೆ
ಕಣ್ಮರೆಯಾಗಿದೆ ಭಾವನಾತ್ಮಕ ಮನಸು......
ಯಾರಿಗೂ ಬೇಡವಾಗಿದೆ ಎನ್ನ ಪ್ರೀತಿ, ವಿಶ್ವಾಸ......
ಭಾವನೆಗಳು ಯಾರಲ್ಲೂ ಹೇಳಲಾಗದೆ
ಬತ್ತಿಹೋಗಿದೆ ಅಂತರಾಳದಿ......
ಆದರೂ ಬರವಸೆಯಿಂದ ಕಾಯುತಿರುವೆ......
ಅವಿಶ್ವಾಸದ ಕಾರ್ಮೋಡ ಕರಗಿ
ಮಳೆಯಾಗಿ ಹರಿಯುವುದೇ ಎಂದು......!!
ಪ್ರೀತಿಯ ಮಳೆ ಮತ್ತೆ ಸುರಿದೀತೆ ಎಂದು......!!
ಯಾವಾಗ......??
ಪರಿವರ್ತನೆಯ ಹೃದಯಕ್ಕಾಗಿ ಕಾಯುತ್ತಿರುವೆ ನಾ......!!

-- ಆಶ್ರಿತಾ ಬಂಗೇರ

ಅಂತರಂಗದ ವೇದನೆ.....


ಮಲಗುವೆ ನಿದ್ರಿಸ ಬೇಕೆಂದಲ್ಲ ,
ಕಳೆವ ರಾತ್ರಿಯ ಬೆಳಕ ಕಾಣಬೇಕೆಂದು
ಮುಚ್ಚುವೆ ಕಣ್ಣುಗಳನು
ದೇಹದ ದಣಿವಿನಿಂದಲ್ಲ
ಕಾರಿರುಳು ಕಗ್ಗತ್ತಲೆ ನುಸುಳೀತು ಕಣ್ಣೋಳಗಿಂದ ಮನಕೆ ಎಂದು......
ಹಗಲು ಕಾಣುವ ಜಗದೊಳಗಿನ ನೋವು
ಮುಚ್ಚಿದ ಕಣ್ಣೋಳಗೆ ಕರಗಿ ನೀರಾಗಲೆಂದು......!!

--ಆಶ್ರಿತಾ ಬಂಗೇರ

ಹೃದಯಾ ಸುಪ್ತಭಾವನೆಗಳ ಜ್ವಾಲಾಮುಖಿ



ಹೃದಯಾ ಸುಪ್ತಭಾವನೆಗಳ ಜ್ವಾಲಾಮುಖಿ
ಎಂದು ಹೇಳಿದರೆ ಉತ್ಪ್ರೇಕ್ಷೆಯಾದೀತು.....
ಆದರೂ ನಿಜ.....!!
ಹೂವಿನ ಮೊಗ್ಗುಗಳಲ್ಲಿ ಅಡಗಿದ ಸೌರಭದ ಉನ್ಮಾದವನ್ನು ಹೇಗೆ ಹೇಳಬೇಕು?
ಮೊಗ್ಗುಗಳಲ್ಲಿ ಇರಬಹುದಾದದ್ದನ್ನು ಊಹಿಸಬಹುದು.....
ಅರಳಿದ ಮೇಲೆ ಅನುಭವಿಸಬಹುದು.....
ಆದರೂ ಕೂಡ.....
ಸೌರಭದ ಅನುಭವ, ಅದರ ಹಿಂದಿನ ಉನ್ಮಾದದ ಸಾಮರ್ಥ್ಯದ
ಸ್ವರೂಪವನ್ನು ತಿಳಿಯಲಾಗದು.
ಹಾಗೆಯೇ ಹೃದಯದ ಭಾವನೆಗಳೂ ಕೂಡ.....!!

-ಆಶ್ರಿತಾ ಬಂಗೇರ

ಆತನಿಗೊಂದು ಪತ್ರ


ವ್ಯಕ್ತಿ ಕಣ್ಮರೆ ಯಾದರೂ
ಮನಸ್ಸಿನಿಂದ ಕಣ್ಮರೆ ಯಾಗುವುದಿಲ್ಲ
ನೋಡುತ್ತಿರುವಾಗಿನ ಸಂತೋಷ ಮನಸ್ಸಿನಲ್ಲಿ ಉಳಿದರೆ ಸಾಕಲ್ಲವೇ.....??

ನಿನ್ನಿಂದ ನನಗೆ ಇಷ್ಟಾದರೂ ಲಭಿಸಿತು ಎನ್ನುವುದೇ ಒಂದು ದೊಡ್ಡ ಸಮಾಧಾನ. ಇದುವರೆಗೆ ನಿನ್ನ ಹತ್ತಿರವಿದ್ದಾಗ ನಾನು ಪಡೆದ ಆನಂದಕ್ಕೆ, ಸುಖಕ್ಕೆ ಸರಿಸಮನಾದ ಆನಂದ ಬೇರೊಂದಿಲ್ಲ. ಹಾಗೆ ನೋಡಿದರೆ ನಾನು ಯಾವುದನ್ನೂ ಬಯಸ ಬಾರದು ಇನ್ನು. ನಿನ್ನ ಹತ್ತಿರವೇ ಇರಬೇಕೆಂಬ ಬಯಕೆಯ ಹೊರತು ಬೇರೆ ಯಾವುದೂ ನನಗೆ ಉಳಿದಿಲ್ಲ ..... ಅಖಂಡವಾಗಿ ಕಾಯುತ್ತಿರುವುದರ ಹೊರತು ನಾನು ಏನನ್ನೂ ಮಾಡದವಳಾಗಿದ್ದೇನೆ. ಆದರೆ ಇಂಥ ನಿರಾಶೆಯಲ್ಲಿಯೂ ಒಂದೊಂದು ಸಲ ಆಶಾ ಕಿರಣವನ್ನು ಕಾಣುತ್ತಿದ್ದೆ ಸಮಾಧಾನ ಹೇಳಿಕೊಳ್ಳುತ್ತಿದ್ದೆ .ನೀನು ಅಂಥವನಲ್ಲ ಕೊನೆಯವರೆಗೂ ನೀನು ನನ್ನನ್ನು ನೋಯಿಸಲಾರೆ ಎಂದು ಒಂದೊಂದು ಸಲವಾದರೆ, ಇನ್ನು ಕೆಲವು ಸಲ ನೊಂದರೆ ಏನಾಯಿತು ? ನಿನ್ನ ಸಲುವಾಗಿ ಅಲ್ಲವೇ ಈ ನೋವು? ನಿನಗಾಗಿ ಬೇಕಾದದ್ದನ್ನು ಮಾಡಬಲ್ಲೆ, ಬೇಕಾದದ್ದನ್ನು ಕೊಡಬಲ್ಲೆ , ಎನ್ನುವವಳಿಗೆ ಇಷ್ಟು ನೋವನ್ನು ಸಹಿಸುವುದಾಗದೆ? ಎಂದು ಹೇಳಿಕೊಳ್ಳುತ್ತಿದ್ದೆ. ಆದರೆ ಇಂಥ ಸಮಾಧಾನವಾದರೂಎಷ್ಟು ಕಾಲ ನಿಲ್ಲಬೇಕು? ಒಂದೊಂದು ಸಲ ಕಡು ಬೆಂದು ಕಂಗಾಲಾಗಿರುತ್ತಿದ್ದೆ . ಈ ಪರಿಯಾಗಿ ನನ್ನ ಹೃದಯವನ್ನು ಸೆರೆಹಿಡಿದು ಗೋಳಿಗೀಡು ಮಾಡುವುದಾದರೆ ನೀನು ಒಬ್ಬ ದುಷ್ಟ , ಮರುಕವಿಲ್ಲದ ಮಾಯಾವಿ ಎಂದು ಶಪಿಸುವವರೆಗೂ ಕಂಗೆಡುತ್ತಿದ್ದೆ... ಒಂದೊಂದು ಸಲ ಬೇಡುತ್ತಿದ್ದೆ, ಪ್ರಾರ್ಥಿಸುತಿದ್ದೆ... " ನೀನಿಲ್ಲದೆ ನಾನಿಲ್ಲ" ಎಂದು ಹೇಳಿದ್ದು ಮರೆತು ಹೋಯಿತೆ? ಎಂದು ಮೊರೆ ಇಡುತ್ತಿದ್ದೆ. ಆದರೆ ನನ್ನ ಎಲ್ಲಾ ಬೇಡಿಕೆಗಳು ಗಾಳಿ ಪಾಲಾಯಿತು... ನನ್ನ ಬೇಸರ ನೀರ ಹೋಮವಾಯಿತು...
ಒಂದು ಕಡೆ ಮನಸ್ಸು ಹೀಗೆ ನೊಂದು ಬಳಲುತ್ತಿತ್ತಾದರೆ, ಇನ್ನೊಂದು ಕಡೆ ನೀನು ಒದಗಿಸಿದ ಸಂತಸದ ಸಾವಿರ ಸನ್ನಿವೇಶಗಳನ್ನು ನೆನೆದು ಕೃತಜ್ಞತೆ ಮೂಡುತ್ತಿತ್ತು. ಕೊನೆಯವರೆಗೂ ನನ್ನನೆಂದೂ ನೋಯಿಸಲಾರೆ ಎಂಬ ಭರವಸೆಯಲ್ಲಿಯೇ ದಿನಗಳನ್ನು ಕಳೆಯುತ್ತಿದ್ದೆ ಇಲ್ಲದಿದ್ದರೆ ನಾನು ಬದುಕಿರಲು ಸಾಧ್ಯವಿತ್ತೆ? ನಿನ್ನನ್ನು ಕುರಿತು ಚಿಂತಿಸುತ್ತಿರುವುದೇ ನನಗೆ ಒಂದು ಕೆಲಸವಾಯಿತು... ನೀನು ಹೇಗೆ? ಏನು? ಎಂದು ನೂರು ಬಗೆಯಲ್ಲಿ ಕೇಳಿಕೊಂಡು ನೂರು ಬಗೆಯ ಉತ್ತರವನ್ನು ನನಗೆ ನಾನೇ ಹೇಳಿಕೊಳ್ಳಬೇಕಾಯಿತು... ದಿನದಿಂದ ದಿನಕ್ಕೆ ನಿನ್ನ ಮೇಲಿನ ಭರವಸೆಯು ಕುಸಿಯಲಾರಂಭಿಸಿತು... ಭರವಸೆಗಳು ಕುಸಿದಾಗ ನಿರಾಶೆ ತಲೆಯೆತ್ತುತ್ತಿತ್ತು... ನಿರಾಶೆಯೋಡನೆ ನೋವು, ನೋವಿನೊಡನೆ ಕೋಪ , ಶಾಪ , ಬೇಡಿಕೆ ಎಂದು ಮತ್ತೆ ಅದೇ ಕಥೆ..... ಮನಸ್ಸು ಹೀಗೆ ಉಯ್ಯಾಲೆ ಯಾಡುತ್ತಾ ನೀ ನೀಡಿದ ಹಿಂದಿನ ಸುಖವ ನೆನೆಯುವುದರ ಹೊರತು ಬೇರೆ ಸುಖ ನನದಾಗಲಿಲ್ಲವಲ್ಲ ಎಂದು ನಾನಾ ಬಗೆಯಲ್ಲಿ ಯೋಚಿಸುತ್ತಾ ನನ್ನ ಬದುಕಿನ ಕ್ರಮವನ್ನೇ ಬದಲಾಯಿಸಿತು... ಒಲವು ಲೋಕಬಾಹಿರ ಎಂದು ತಿಳಿದು ಬಂಧನವನ್ನು ಲೆಕ್ಕಿಸದೆ ಬಿರುಗಾಳಿಯಂತೆ ಎಲ್ಲಿಂದಲೋ ಬಂದು ನಿನ್ನೆಡೆಗೆ ಸೆಳೆದುಕೊಂಡು ಹೋದ ಹೃದಯದ ಒಲುಮೆಗೆ ದುಖ:ವೇ ಕೊನೆ ಎನ್ನಿಸಿತಾದರು ಕೊನೆಕೊನೆಗೆ ನನಗೆ ಅನ್ನಿಸಿದ್ದು ಮಾತ್ರ ಒಲವು ಎನ್ನುವುದು ಎಲ್ಲರಿಗೂ ಹೀಗೆನಾ ನನಗೆ ಮಾತ್ರ ಹೀಗೆನಾ ಎಂದು.....?? ಯಾರನ್ನು ಕೇಳುವುದು .....??

ಇಂತಿ ನಿನ್ನ ಪ್ರೀತಿಯ
ನಿನ್ನವಳು

ಕಾತುರ.....


ನಿನ್ನ ನೋಡಲು ನನ್ನ ಕಣ್ಗಳು ಕಾತರಿಸಿ ಕಾಯುತಿರುವುದು,
ದಿನಗಳುರುಳಿ ವರ್ಷಗಳು ಕಳೆದರೂ...
ನಿನ್ನನಪ್ಪಿ ನೋಡುವಾಸೆ ಮನವ ಕೊರೆಯುತಿರುವುದು...
ನೀ ದೂರವಿದ್ದರೂ ಗೆಳೆಯಾ...... ಕಾಡುವ ಪ್ರೀತಿಯ ನೆನಪುಗಳು
ನೀ ಎಂದು ಬರುವೆ ಎಂದು ಕಾಯುತಿರುವುದು......!!
ನಿನ್ನ ನೆನಪು ತರುವ ಕುರುಹು ಮನವ ಕೆಣಕಿದಾಗ,
ನನ್ನ ಹೃದಯದ ಮನದಲ್ಲಿ ಭಾವದಲೆಗಳೆದ್ದು ಹರುಷದಿಂದ
ಮೇರೆ ಮೀರಿ ಹಿಗ್ಗಿ ನಲಿಯುತಿರುವುದು......
ಗೆಳೆಯಾ ನಿನ್ನ ನೋಡಲು ಮನವು ಕಾತರಿಸಿ ಬಯಸಿ ಹಾಡುತಿರುವುದು......
ನೀ ಎಂದು ಬರುವೆಯೆಂದು......??
- ಆಶ್ರಿತಾ ಬಂಗೇರ

ಪ್ರೀತಿಯಾಳವ ಹೇಗೆ ಹೇಳಲಿ......??


ಪ್ರೀತಿಯಾಳವ ಹೇಗೆ ಹೇಳಲಿ?
ಹೃದಯಾಂತರಾಳದಲ್ಲಿ ಅರಳಿದ ಹೂವೆ ನಿನಗೆ......

ಮನಸಿನಾಳವ ಹೇಳುವೆ,
ಕನಸಿನಾಳವ ಹೇಳುವೆ,
ಪ್ರೀತಿಯಾಳವ ಹೇಗೆ ಹೇಳಲಿ......??

ನೋವಿನಾಳವ ಹೇಳುವೆ,
ನಲಿವಿನಾಳವ ಹೇಳುವೆ,
ಪ್ರೀತಿಯಾಳವ ಹೇಗೆ ಹೇಳಲಿ......??

ಕಲ್ಪನೆಯಾಳವ ಹೇಳುವೆ,
ಭಾವನೆಯಾಳವ ಹೇಳುವೆ,
ಪ್ರೀತಿಯಾಳವ ಹೇಗೆ ಹೇಳಲಿ......??

ಗೆಲುವಿನಾಳವ ಹೇಳುವೆ,
ಚೆಲುವಿನಾಳವ ಹೇಳುವೆ,
ಪ್ರೀತಿಯಾಳವ ಹೇಗೆ ಹೇಳಲಿ......??

-ಆಶ್ರಿತಾ ಬಂಗೇರ

ಸುಖ, ಸಂತೋಷದ ನೆನಪು


ಸುಖ, ಸಂತೋಷದ ನೆನಪು ಯಾವಾಗಲೂ ನೋವು.....!!
ಸುಖದ ನೆನಪು ಯಾವಾಗಲೂ ಉಳಿಯಬಹುದು ,ಆದರೆ.....
ಅದು ಇಲ್ಲದಾದಾಗ ಉಂಟಾಗುವ ನೋವು.....??
ಯಾವಾಗಲೂ ಕಠಿಣ ಮನಸಿನವು,
ನೋವಿನ ಗುರುತನ್ನು ಉಳಿಸಿ ಹೋಗುತ್ತವೆ
ಎಂದಿಗೂ ವಾಸಿಯಾಗದೇ ಇರೋ ಗಾಯದ ಹಾಗೆ.....!!
ಸ್ನೇಹ , ಪ್ರೀತಿ , ಬಂಧುತ್ವದ ಸಂಭಂದಗಳೂ ಹಾಗೆ .....!!
ಭಿನ್ನ ವಿಭಿನ್ನ ಮನಸಿನವು ನೋವುಣಿಸಿ ಉಳಿಯುತ್ತದೆ ,
ಕಾಡುತ್ತದೆ ಜೀವನ ಪರ್ಯಂತ ಎಂದಿಗೂ ಮರೆಯದ ಹಾಗೆ.....!!

-ಆಶ್ರಿತಾ ಬಂಗೇರ