Tuesday, July 13, 2010

ಆತನಿಗೊಂದು ಪತ್ರ


ವ್ಯಕ್ತಿ ಕಣ್ಮರೆ ಯಾದರೂ
ಮನಸ್ಸಿನಿಂದ ಕಣ್ಮರೆ ಯಾಗುವುದಿಲ್ಲ
ನೋಡುತ್ತಿರುವಾಗಿನ ಸಂತೋಷ ಮನಸ್ಸಿನಲ್ಲಿ ಉಳಿದರೆ ಸಾಕಲ್ಲವೇ.....??

ನಿನ್ನಿಂದ ನನಗೆ ಇಷ್ಟಾದರೂ ಲಭಿಸಿತು ಎನ್ನುವುದೇ ಒಂದು ದೊಡ್ಡ ಸಮಾಧಾನ. ಇದುವರೆಗೆ ನಿನ್ನ ಹತ್ತಿರವಿದ್ದಾಗ ನಾನು ಪಡೆದ ಆನಂದಕ್ಕೆ, ಸುಖಕ್ಕೆ ಸರಿಸಮನಾದ ಆನಂದ ಬೇರೊಂದಿಲ್ಲ. ಹಾಗೆ ನೋಡಿದರೆ ನಾನು ಯಾವುದನ್ನೂ ಬಯಸ ಬಾರದು ಇನ್ನು. ನಿನ್ನ ಹತ್ತಿರವೇ ಇರಬೇಕೆಂಬ ಬಯಕೆಯ ಹೊರತು ಬೇರೆ ಯಾವುದೂ ನನಗೆ ಉಳಿದಿಲ್ಲ ..... ಅಖಂಡವಾಗಿ ಕಾಯುತ್ತಿರುವುದರ ಹೊರತು ನಾನು ಏನನ್ನೂ ಮಾಡದವಳಾಗಿದ್ದೇನೆ. ಆದರೆ ಇಂಥ ನಿರಾಶೆಯಲ್ಲಿಯೂ ಒಂದೊಂದು ಸಲ ಆಶಾ ಕಿರಣವನ್ನು ಕಾಣುತ್ತಿದ್ದೆ ಸಮಾಧಾನ ಹೇಳಿಕೊಳ್ಳುತ್ತಿದ್ದೆ .ನೀನು ಅಂಥವನಲ್ಲ ಕೊನೆಯವರೆಗೂ ನೀನು ನನ್ನನ್ನು ನೋಯಿಸಲಾರೆ ಎಂದು ಒಂದೊಂದು ಸಲವಾದರೆ, ಇನ್ನು ಕೆಲವು ಸಲ ನೊಂದರೆ ಏನಾಯಿತು ? ನಿನ್ನ ಸಲುವಾಗಿ ಅಲ್ಲವೇ ಈ ನೋವು? ನಿನಗಾಗಿ ಬೇಕಾದದ್ದನ್ನು ಮಾಡಬಲ್ಲೆ, ಬೇಕಾದದ್ದನ್ನು ಕೊಡಬಲ್ಲೆ , ಎನ್ನುವವಳಿಗೆ ಇಷ್ಟು ನೋವನ್ನು ಸಹಿಸುವುದಾಗದೆ? ಎಂದು ಹೇಳಿಕೊಳ್ಳುತ್ತಿದ್ದೆ. ಆದರೆ ಇಂಥ ಸಮಾಧಾನವಾದರೂಎಷ್ಟು ಕಾಲ ನಿಲ್ಲಬೇಕು? ಒಂದೊಂದು ಸಲ ಕಡು ಬೆಂದು ಕಂಗಾಲಾಗಿರುತ್ತಿದ್ದೆ . ಈ ಪರಿಯಾಗಿ ನನ್ನ ಹೃದಯವನ್ನು ಸೆರೆಹಿಡಿದು ಗೋಳಿಗೀಡು ಮಾಡುವುದಾದರೆ ನೀನು ಒಬ್ಬ ದುಷ್ಟ , ಮರುಕವಿಲ್ಲದ ಮಾಯಾವಿ ಎಂದು ಶಪಿಸುವವರೆಗೂ ಕಂಗೆಡುತ್ತಿದ್ದೆ... ಒಂದೊಂದು ಸಲ ಬೇಡುತ್ತಿದ್ದೆ, ಪ್ರಾರ್ಥಿಸುತಿದ್ದೆ... " ನೀನಿಲ್ಲದೆ ನಾನಿಲ್ಲ" ಎಂದು ಹೇಳಿದ್ದು ಮರೆತು ಹೋಯಿತೆ? ಎಂದು ಮೊರೆ ಇಡುತ್ತಿದ್ದೆ. ಆದರೆ ನನ್ನ ಎಲ್ಲಾ ಬೇಡಿಕೆಗಳು ಗಾಳಿ ಪಾಲಾಯಿತು... ನನ್ನ ಬೇಸರ ನೀರ ಹೋಮವಾಯಿತು...
ಒಂದು ಕಡೆ ಮನಸ್ಸು ಹೀಗೆ ನೊಂದು ಬಳಲುತ್ತಿತ್ತಾದರೆ, ಇನ್ನೊಂದು ಕಡೆ ನೀನು ಒದಗಿಸಿದ ಸಂತಸದ ಸಾವಿರ ಸನ್ನಿವೇಶಗಳನ್ನು ನೆನೆದು ಕೃತಜ್ಞತೆ ಮೂಡುತ್ತಿತ್ತು. ಕೊನೆಯವರೆಗೂ ನನ್ನನೆಂದೂ ನೋಯಿಸಲಾರೆ ಎಂಬ ಭರವಸೆಯಲ್ಲಿಯೇ ದಿನಗಳನ್ನು ಕಳೆಯುತ್ತಿದ್ದೆ ಇಲ್ಲದಿದ್ದರೆ ನಾನು ಬದುಕಿರಲು ಸಾಧ್ಯವಿತ್ತೆ? ನಿನ್ನನ್ನು ಕುರಿತು ಚಿಂತಿಸುತ್ತಿರುವುದೇ ನನಗೆ ಒಂದು ಕೆಲಸವಾಯಿತು... ನೀನು ಹೇಗೆ? ಏನು? ಎಂದು ನೂರು ಬಗೆಯಲ್ಲಿ ಕೇಳಿಕೊಂಡು ನೂರು ಬಗೆಯ ಉತ್ತರವನ್ನು ನನಗೆ ನಾನೇ ಹೇಳಿಕೊಳ್ಳಬೇಕಾಯಿತು... ದಿನದಿಂದ ದಿನಕ್ಕೆ ನಿನ್ನ ಮೇಲಿನ ಭರವಸೆಯು ಕುಸಿಯಲಾರಂಭಿಸಿತು... ಭರವಸೆಗಳು ಕುಸಿದಾಗ ನಿರಾಶೆ ತಲೆಯೆತ್ತುತ್ತಿತ್ತು... ನಿರಾಶೆಯೋಡನೆ ನೋವು, ನೋವಿನೊಡನೆ ಕೋಪ , ಶಾಪ , ಬೇಡಿಕೆ ಎಂದು ಮತ್ತೆ ಅದೇ ಕಥೆ..... ಮನಸ್ಸು ಹೀಗೆ ಉಯ್ಯಾಲೆ ಯಾಡುತ್ತಾ ನೀ ನೀಡಿದ ಹಿಂದಿನ ಸುಖವ ನೆನೆಯುವುದರ ಹೊರತು ಬೇರೆ ಸುಖ ನನದಾಗಲಿಲ್ಲವಲ್ಲ ಎಂದು ನಾನಾ ಬಗೆಯಲ್ಲಿ ಯೋಚಿಸುತ್ತಾ ನನ್ನ ಬದುಕಿನ ಕ್ರಮವನ್ನೇ ಬದಲಾಯಿಸಿತು... ಒಲವು ಲೋಕಬಾಹಿರ ಎಂದು ತಿಳಿದು ಬಂಧನವನ್ನು ಲೆಕ್ಕಿಸದೆ ಬಿರುಗಾಳಿಯಂತೆ ಎಲ್ಲಿಂದಲೋ ಬಂದು ನಿನ್ನೆಡೆಗೆ ಸೆಳೆದುಕೊಂಡು ಹೋದ ಹೃದಯದ ಒಲುಮೆಗೆ ದುಖ:ವೇ ಕೊನೆ ಎನ್ನಿಸಿತಾದರು ಕೊನೆಕೊನೆಗೆ ನನಗೆ ಅನ್ನಿಸಿದ್ದು ಮಾತ್ರ ಒಲವು ಎನ್ನುವುದು ಎಲ್ಲರಿಗೂ ಹೀಗೆನಾ ನನಗೆ ಮಾತ್ರ ಹೀಗೆನಾ ಎಂದು.....?? ಯಾರನ್ನು ಕೇಳುವುದು .....??

ಇಂತಿ ನಿನ್ನ ಪ್ರೀತಿಯ
ನಿನ್ನವಳು

5 comments:

  1. This comment has been removed by the author.

    ReplyDelete
  2. Hello Asritha,

    Nimma patra poora bhavanegalinda tumbide, bareda shyli tumba chennagi moodi bandide....... dayavittu Heli yaaaru Aaaa Dushta, nimmannu dukhada maduvinalli bittavanu.......Ondu maatantu nija, nimma Kye hidida(ya)vanu Adrustavanta( savira janma punya madidavanira beku)...

    Nimmella anisikegalu arthagarbithavagive,.......nice to read

    Expecting more

    All the best

    ReplyDelete